ಟಿನಾಫೊರ
ಪ್ರಾಣಿರಾಜ್ಯದ ಮೆಟeóÉೂೀವ ಗುಂಪಿಗೆ ಸೇರಿದ ಒಂದು ವಿಭಾಗ. ಇದನ್ನು ಸೀಲೆಂಟರೇಟ ವಿಭಾಗದ ಒಂದು ಉಪವಿಭಾಗವೆಂದು ಪರಿಗಣಿಸಲಾಗಿತ್ತು. ಆದರೆ ಇದಕ್ಕೆ ಸೇರಿದ ಪ್ರಾಣಿಗಳಲ್ಲಿ ಅವಕ್ಕೆ ಮಾತ್ರ ವಿಶಿಷ್ಟವಾದ ಹಲವಾರು ಲಕ್ಷಣಗಳಿರುವುದರಿಂದ ಇದಕ್ಕೆ ಒಂದು ವಿಭಾಗದ ದರ್ಜೆಯನ್ನು ಕೊಡಲಾಗಿದೆ. ಇದರಲ್ಲಿ ಟೆಂಟ್ಯಾಕ್ಯುಲೇಟ ಮತ್ತು ನ್ಯೂಡ ಎಂಬ ಎರಡು ವರ್ಗಗಳಿವೆ. ಎರಡು ವರ್ಗಗಳೂ ಸೇರಿದಂತೆ ಸುಮಾರು 80 ಪ್ರಭೇದಗಳುಂಟು. ಎಲ್ಲವೂ ಸಾಗರವಾಸಿಗಳು. ಇವುಗಳಲ್ಲಿ ಕೆಲವು ಪ್ರಭೇದಗಳು ಉಷ್ಣವಲಯದಿಂದ ಧ್ರುವಪ್ರದೇಶದವರೆಗಿನ ಎಲ್ಲ ಸಾಗರಗಳಲ್ಲಿಯೂ ವಾಸಿಸುತ್ತವೆ. ಉದಾಹರಣೆಗೆ-ಪ್ಲೂರೊಬ್ರೇಕಿಯ ಪೈಲಿಯಸ್ (ಇದಕ್ಕೆ ಕಡಲ ನೆಲ್ಲಿಕಾಯಿ, ಕಡಲ ಅಕ್ರೋಟು ಅಥವಾ ಬೆಕ್ಕಿನ ಕಣ್ಣು ಎಂಬ ಹೆಸರುಗಳಂಟು) ಮತ್ತು ಬೆರೋಯಿಕ್ಯುಕಮಿಸ್. ಇನ್ನು ಕೆಲವು ಬಗೆಗಳು ಯಾವುದಾದರೂ ಒಂದು ವಲಯಕ್ಕೆ ಸೀಮಿತವಾಗಿರುವುವು. ಅಂತೆಯೇ ಹೆಚ್ಚಿನವು ಕರಾವಳಿಗಳ ಹೆಚ್ಚು ಆಳವಿಲ್ಲದ ಪ್ರದೇಶಗಳಲ್ಲಿ ಕಂಡುಬಂದರೆ ಕೆಲವು ಮಾತ್ರ 3000 m ಆಳವಿರುವ ಸ್ಥಳಗಳಲ್ಲೂ ಜೀವಿಸುತ್ತವೆ. 

ಗಾತ್ರ, ಆಕಾರ ಮತ್ತು ಬಣ್ಣ: ಈ ವಿಭಾಗಕ್ಕೆ ಸೇರಿದ ಬಹುಪಾಲು ಪ್ರಾಣಿಗಳು ಅಂಡಾಕಾರದವು ಇಲ್ಲವೆ ಚಂಡಿನಾಕಾರದವು. ಇವುಗಳ ಗಾತ್ರ 5-20ಮಿ.ಮೀ. ಕೆಲವು ಮಾತ್ರ ಇನ್ನೂ ದೊಡ್ಡವಿರುವುದುಂಟು. ಉದಾಹರಣೆಗೆ ಬೆರೋಯೀ ಪ್ರಭೇದ ಸುಮಾರು 9ಸೆಂ.ಮೀ. ಉದ್ದ ಇದೆಯಾದರೆ ಯೂಕ್ಯಾರಿಸ್ ಮಲ್ಟಿಕಾರ್ನಿಸ್ ಎಂಬುದು 10 ಸೆಂ.ಮೀ. ಉದ್ದವೂ     ಸೆಸ್ಟಸ್‍ವನೆರಿಸ್ (ವೀನಸ್ ಡಾಬು) 1.5ಮೀ ಉದ್ದವೂ ಇವೆ. ಕೊನೆಯ ಬಗೆಯದು ಚಪ್ಪಟೆಯಾದ ಪಟ್ಟೆಯಂತಿದೆ. ಹೆಚ್ಚಿನ ಪ್ರಾಣಿಗಳು ವರ್ಣರಹಿತ ಹಾಗೂ ಪಾರದರ್ಶಕ. ಕೆಲವು ಬಗೆಯವು ಮಾತ್ರ ನವಿರಾದ ನೇರಳೆಬಣ್ಣದವಾಗಿರುತ್ತವೆ. ವರ್ಣರಹಿತ ಬಗೆಗಳಲ್ಲಿ ಕೆಲವಕ್ಕೆ ವರ್ಣ ಸ್ಫುರಣಸಾಮಥ್ರ್ಯ ಉಂಟು. ಇವು ತುಂಬ ನಾಜೂಕಾದ ಪ್ರಾಣಿಗಳೂ ಹೌದು.
ಹೆಚ್ಚು ಕಡಿಮೆ ಎಲ್ಲ ಪ್ರಭೇದಗಳೂ ಸಂದೀಪ್ತಶೀಲಗಳು. ರಾತ್ರಿವೇಳೆಯಲ್ಲಿ ಉಜ್ಜ್ವಲವಾದ ಹಸಿರು ಇಲ್ಲವೆ ನೀಲಿ ಬಣ್ಣದಿಂದ ಬೆಳಗುತ್ತವೆ.

ದೇಹರಚನೆ: ಟಿನಾಫೊರ ಗುಂಪಿನ ಜೀವಿಗಳ ದೇಹರಚನೆ ವಿಶಿಷ್ಟವಾಗಿದೆ. ಸೈಡಿಪ್ಪಿಡ ಗಣಕ್ಕೆ ಸೇರಿದ ಪ್ಲೂರೊಬ್ರೇಕಿಯ ಪ್ರಭೇದವನ್ನು ಉದಾಹರಣೆಯಾಗಿ ಅಭ್ಯಸಿಸಬಹುದು. ಇದರ ದೇಹ ಹೆಚ್ಚು ಕಡಿಮೆ ಗುಂಡಗಿದೆ. ಇದರ ಒಂದು ಪಾಶ್ರ್ವದಲ್ಲಿ (ಮುಖಭಾಗ) ಬಾಯಿಯಿದೆ. ಇದರ ವಿರುದ್ಧ ಪಾಶ್ರ್ವದಲ್ಲಿ (ಅಪಮುಖಭಾಗ) ಸ್ಟ್ಯಾಡೊಸಿಸ್ಟ್ ಎಂಬ ಹೆಸರಿನ ಒಂದು ಜಟಿಲವಾದ ಸಂವೇದನಾಂಗ ಉಂಟು. ಸ್ಟ್ಯಾಟೊಸಿಸ್ಟನಲ್ಲಿ ಸುಣ್ಣದಿಂದ ರಚಿತವಾದ ಗಂಟುಗಳ (ಸ್ಟ್ಯಾಟೊಲಿತ್ಸ್) ಒಂದು ಗೊಂಚಲು, ಇದರಿಂದ ಹೊರಟಿರುವ ಮತ್ತು ಪರಸ್ಪರ ಕೂಡಿಕೊಂಡ ಶಿಲಕೆಗಳ ನಾಲ್ಕು ಗುಂಪುಗಳು ಮತ್ತು ಇವೆರಡನ್ನೂ ಆವರಿಸಿರುವ ಒಂದು ಗುಮ್ಮಟವೂ (ಬೆಲ್) ಇವೆ. ಅಪಮುಖ ಭಾಗದಿಂದ ಬಾಯಿಯ ಕಡೆಗೆ ಉದ್ದುದ್ದವಾದ 8 ಸಾಲು ಫಲಕಗಳಿವೆ. ಇವಕ್ಕೆ ಹಣಿಗೆ ಫಲಕಗಳು (ಕೂಂಬ್ ಪ್ಲೇಟ್ಸ್) ಎಂದು ಹೆಸರು. ಇವುಗಳಲ್ಲಿ ಸೂಕ್ಷ್ಮವಾದ ಶಿಲಕೆಗಳುಂಟು. ಈ ಶಿಲಕೆಗಳು ಸುಸಂಘಟಿತ ಬಡಿತದ ಮೂಲಕ ಪ್ರಾಣಿ ನೀರಿನಲ್ಲಿ ಚಲಿಸುತ್ತದೆ. ಹೀಗೆ ಚಲಿಸುವಾಗ ಸಾಮಾನ್ಯವಾಗಿ ಮುಖಭಾಗ ಮುಂದಕ್ಕೆ ಇರುತ್ತದೆ. ದೇಹದ ಆಚೀಚೆ ಹೆಣಿಗೆ ಫಲಕಗಳ ನಡುವೆ ಆಳವಾದ ಎರಡು ಸಂಚಿಗಳುಂಟು. ಇವುಗಳಿಂದ ಒಂದೊಂದು ಸ್ಪರ್ಶಕ (ಟೆಂಟಕಲ್) ಹೊರಡುತ್ತದೆ. ಒಂದೊಂದರ ಮೇಲೂ ಸೂಕ್ಷ್ಮವಾದ ಹಲವಾರು ಕವಲುಗಳುಂಟು. ಸ್ಪರ್ಶಕಗಳ ಸಹಾಯದಿಂದ ಆಹಾರವನ್ನು ಬಾಯಿಗೆ ಎಳೆದುಕೊಳ್ಳುತ್ತದೆ. ಸ್ಪರ್ಶಕಗಳ ಮೇಲೆ ವಿಶೇಷ ರೀತಿಯ ಕೋಶಗಳುಂಟು. ಇವಕ್ಕೆ ಲ್ಯಾಸೊ ಕೋಶಗಳು ಅಥವಾ ಕಾಲೊಬ್ಲಾಸ್ಟುಗಳು ಎಂದು ಹೆಸರು. ಇವು ಸ್ರವಿಸುವ ಒಂದು ಬಗೆಯ ಅಂಟುದ್ರವದಿಂದಾಗಿ ಸ್ಪರ್ಶಕವನ್ನು ಮುಟ್ಟುವ ಆಹಾರಪ್ರಾಣಿಗಳು ಸಿಕ್ಕಿಹಾಕಿಕೊಂಡು ಬಿಡುತ್ತವೆ.

ಈ ಗುಂಪಿನಲ್ಲಿ ಹೆಚ್ಚಿನವು ಸ್ವತಂತ್ರ ಜೀವಿಗಳು. ಇತರ ಬಗೆಯ ತೇಲು ಜೀವಿಗಳಾದ ಸಣ್ಣಪುಟ್ಟ ಹುಳುಗಳನ್ನು, ಕೋಪಿಪೊಡ ಗುಂಪಿನ ಪ್ರಾಣಿಗಳನ್ನು, ಮೀನುಗಳ ಮೊಟ್ಟೆ ಹಾಗೂ ಮರಿಗಳನ್ನು ಸೀಗಡಿಗಳ ಡಿಂಬಗಳನ್ನು ತಿಂದು ಜೀವಿಸುತ್ತವೆ. ಕೆಲವು ಪ್ರಭೇದಗಳು ಮಾತ್ರ ಬೇರೆ ಪ್ರಾಣಿಗಳ ಪರಾವಂಲಂಬಿಗಳಾಗಿ ಬದುಕುತ್ತವೆ.

ಬಾಯಿಯ ಮೂಲಕ ಒಳಸಾಗುವ ಆಹಾರ ಮೊದಲು ಅಗಲವಾದ ಫ್ಯಾರಿಂಕ್ಸ್‍ನೊಳಕ್ಕೆ ಹೋಗುತ್ತದೆ. ಫ್ಯಾರಿಂಕ್ಸ್‍ನಿಂದ ಸ್ಪರ್ಶಕ ಸಂಚಿಗಳ ಬುಡದೆಡೆಗೆ ಸಾಗುವ ಎರಡು ಪ್ರಧಾನ ಕಾಲುವೆಗಳಿವೆ. ಇವು ಮತ್ತೆ ಮತ್ತೆ ಕವಲೊಡೆದು 12 ಚಿಕ್ಕ ಕಾಲುವೆಗಳಾಗಿ ರೂಪುಗೊಳ್ಳುತ್ತವೆ. ಈ ಇಡೀ ಕಾಲುವೆ ವ್ಯವಸ್ಥೆಯೇ ಜೀರ್ಣಾಂಗಮಂಡಲ. ಈ 12 ಕಾಲುವೆಗಳಲ್ಲಿ 8 ಕಾಲುವೆಗಳು ಹೆಣಿಗೆ ಫಲಕಗಳ ಹಿಂಭಾಗದಲ್ಲೂ (ಇವಕ್ಕೆ ಮೆರಿಡಿಯೋನಲ್ ಕಾಲುವೆಗಳೆಂದು ಹೆಸರು) ಎರಡು ಕಾಲುವೆಗಳು ಫ್ಯಾರಿಂಕ್ಸ್‍ಗೆ ಸಮಾಂತರವಾಗಿಯೂ (ಫ್ಯಾರಿಂಜಿಯಲ್ ಕಾಲುವೆಗಳು) ಉಳಿದೆರಡು ಸ್ಫರ್ಶಕ ಸಂಚಿಗಳ ಉದ್ದಕ್ಕೂ (ಟೆಂಟ್ಯಾಕ್ಯುಲರ್ ಕಾಲುವೆಗಳು) ಸಾಗುತ್ತವೆ. ಜೊತೆಗೆ ಇನ್ನೊಂದು ದೊಡ್ಡ ಕಾಲುವೆ ಅಪಮುಖಭಾಗದಲ್ಲಿನ ಸಂವೇದನಾಂಗದೆಡೆಗೆ  ಸಾಗಿ ಎರಡು ಸೂಕ್ಷ್ಮರಂಧ್ರಗಳ (ಗುದರಂಧ್ರಗಳು) ಮೂಲಕ ಹೊರತೆರೆಯುತ್ತದೆ. ಸೇವಿಸಿದ ಆಹಾರ ಫ್ಯಾರಿಂಕ್ಸಿನಲ್ಲಿ ಕೊಂಚ ಜೀರ್ಣವಾಗಿ, ಅನಂತರ ಕಾಲುವೆಗಳಲ್ಲೆಲ್ಲ ಹಾದು ಪಚನವಾಗುತ್ತದೆ. ಜೀರ್ಣವಾಗದ ಪದಾರ್ಥಗಳು ಬಾಯಿಯ ಮೂಲಕವೂ ಗುದರಂಧ್ರಗಳ ಮೂಲಕವೂ ಹೊರಬರುತ್ತವೆ.

ದೇಹದಲ್ಲಿ ಎಕ್ಟೋಡರ್ಮ್ ಎಂಬ ಹೊರಪದರವೂ ಎಂಡೋಡರ್ಮ್ ಎಂಬ ಒಳಪದರವೂ ಉಂಟು. ಇವೆರಡು ಪದರಗಳ ನಡುವೆ ಮೀಸೊಗ್ಲೀಯ ಎಂಬ ಜೆಲಿಸದೃಶ ವಸ್ತುವಿದೆ. ಈ ವಸ್ತುವಿನ ಕೆಲವು ಭಾಗಗಳಲ್ಲಿ ಸ್ನಾಯುಕೋಶಗಳುಂಟು. ಇವುಗಳ ಸಹಾಯದಿಂದ ಸ್ಪರ್ಶಕಗಳ ಚಲನೆ, ಬಾಯಿಯ ತೆರೆಯುವಿಕೆ ಮುಚ್ಚುವಿಕೆಗಳು ನಡೆಯುತ್ತವೆ. ಮೀಸೊಗ್ಲೀಯದಲ್ಲಿ ಅಲ್ಲಲ್ಲಿ ಚದುರಿದಂತೆ ಇರುವ ಬೇರೆ ರೀತಿಯ ಕೋಶಗಳೂ ಉಂಟು. ಇವನ್ನೂ ಸ್ನಾಯುಕೋಶಗಳನ್ನೂ ಒಟ್ಟಾರೆಯಾಗಿ ಮೀಸೊಡರ್ಮ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಲಕ್ಷಣದಲ್ಲಿ ಟಿನಾಫೊರ ಉಳಿದ ಸೀಲೆಂಟರೇಟಗಳಿಗಿಂತ ಹೆಚ್ಚು ಮುಂದುವರಿದಿದೆ.
ಟಿನಾಫೊರ ಪ್ರಾಣಿಗಳ ಚಟುವಟಿಕೆಗಳನ್ನು ಸಂಯೋಜನೆಗೊಳಿಸುವ ಕಾರ್ಯ ನಿಮ್ನರೀತಿಯ ನರಕೋಶಜಾಲದಿಂದ ನಡೆಯುತ್ತದೆ. ಈ ನರಕೋಶಗಳು ದೇಹಾದ್ಯಂತ ವ್ಯಾಪಿಸಿವೆಯಾದರೂ ಪ್ರಧಾನವಾಗಿ ಹೆಣಿಗೆ ಫಲಕಗಳ ತಳಭಾಗದಲ್ಲಿ ಸಾಂದ್ರಗೊಂಡಿವೆ.
ಪ್ರಜನನ: ಟಿನಾಫೊರ ಗುಂಪಿನ ಪ್ರಾಣಿಗಳು ಉಭಯಲಿಂಗಿಗಳು. ಪ್ರಜನನ ಲೈಂಗಿಕ ರೀತಿಯಿಂದ ನಡೆಯುತ್ತದೆ. ಮೆರಿಡಿಯೋನಲ್ ಕಾಲುವೆಗಳ ಎಂಡೋಡರ್ಮ್ ಕೋಶಗಳಲ್ಲಿ ಅಂಡಗಳು ಮತ್ತು ರೇತ್ರಾಣುಗಳು ಉತ್ಪತ್ತಿಯಾಗುವುವು. ಈ ಕಾಲುವೆಗಳ ಮತ್ತು ಇವನ್ನು ಆವರಿಸಿರುವ ಪದರಗಳ ಸೀಳುವಿಕೆಯಿಂದಾಗಿ ಲೈಂಗಿಕ ಕೋಶಗಳು ದೇಹದಿಂದ ಹೊರಬರುವುವು. ನಿಷೇಚನೆ ಹಾಗೂ ಭ್ರೂಣದ ಬೆಳೆವಣಿಗೆ ಹೊರಗಿನ ನೀರಿನಲ್ಲಿ ನಡೆಯುತ್ತವೆ. ಪ್ಲೂರೊಬ್ರೇಕಿಯದಲ್ಲಿ ನಿಷೇಚಿತ ಮೊಟ್ಟೆ ನೇರವಾಗಿ ಪ್ರೌಢಜೀವಿಯಾಗಿ ಬೆಳೆಯುತ್ತದೆ. ಆದರೆ ಉಳಿದ ಪ್ರಭೇದಗಳಲ್ಲಿ ಮೊಟ್ಟೆಯಿಂದ ಮೊದಲು ಸೈಡಿಪ್ಪಿಡ್ ಡಿಂಬ ಹುಟ್ಟುತ್ತದೆ. ಅನಂತರ ಇದು ಪ್ರಬುದ್ಧಜೀವಿಯಾಗಿ ಬೆಳೆಯುವುದು.

ಟಿನಾಫೊರ ವಿಭಾಗವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ಮೇಲೆ ತಿಳಿಸಿದೆ. ಟೆಂಟ್ಯಾಕ್ಯುಲೇಟ ವರ್ಗದ ಪ್ರಾಣಿಗಳಲ್ಲಿ ಸ್ಪರ್ಶಾಂಗಗಳಿವೆಯಾದರೆ ನ್ಯೂಡ ವರ್ಗದ ಪ್ರಾಣಿಗಳಲ್ಲಿ ಸ್ಪಶಾಂಗಗಳಿಲ್ಲ.
ವರ್ಗ 1 ಟೆಂಟ್ಯಾಕ್ಯುಲೇಟ: ಈ ವರ್ಗದಲ್ಲಿ ನಾಲ್ಕು ಗಣಗಳುಂಟು.

(1) ಸೈಡಿಪ್ಪಿಡ: ಈ ಗಣದ ಪ್ರಾಣಿಗಳು ಪ್ರಪಂಚದ ಬಹುಭಾಗಗಳಲ್ಲಿ ಕಂಡುಬರುತ್ತವೆ. ದೇಹ ಅಂಡಾಕಾರದ್ದು. ಪ್ಲೂರೊಬ್ರೇಕಿಯ, ಹಾರ್ಮಿಫೊರ, ಕೇಲಿಯಾನಿರ ಈ ಗಣದ ಉದಾಹರಣೆಗಳು;

(2) ಲೋಬೇಟ: ಇವುಗಳ ದೇಹ ಚಪ್ಪಟೆಯಾಗಿದೆ. ಆಕಾರ ಗುಂಡಗೆ. ಸ್ಪರ್ಶಾಂಗಕ್ಕೆ ಕೋಶವಿಲ್ಲ. ಉದಾಹರಣೆ: ಬೋಲಿನಾಪ್ಸಿಸ್_ಇವು ಬ್ರಿಟಿಷ್ ದ್ವೀಪ. ಅಮೆರಿಕದ ಅಟ್ಲಾಂಟಿಕ್ ಮತ್ತು ಅರ್ಕ್‍ಟಿಕ್ ತೀರದಲ್ಲಿ ವಾಸಿಸುತ್ತವೆ; ಸೆಮಿಯಾಪ್ಸಿಸ್-ಇದು  ಅಮೆರಿಕದ ಕೇಪ್ ಕಾಡ್ ಮತ್ತು ಕ್ಯಾರಲೈನದಲ್ಲಿ ವಾಸಿಸುತ್ತದೆ.

(3) ಸೆಸ್ಟಿಡ: ಈ ಗಣಕ್ಕೆ ಸೇರಿದ ಜೀವಿಗಳ ದೇಹ ಅಗಲವಾಗಿಯೂ ಚಪ್ಪಟೆಯಾಗಿಯೂ ಇದೆ. ಉದಾಹರಣೆಗೆ ಸೆಸ್ಟಮ್ (ವೀನಸ್ ಡಾಬು ಎಂದೂ ಕರೆಯುತ್ತಾರೆ); ವೆಲಾಮೆನ್; ಇದು ದಕ್ಷಿಣ ಮೆಡಿಟರೇನಿಯನ್ ಸಮುದ್ರದಲ್ಲಿ ಕಂಡುಬರುವ ಸಣ್ಣ ಜೀವಿ. ಸ್ಪರ್ಶಾಂಗಗಳ ಸಹಾಯದಿಂದ ಅಲೆಯಂತೆ ಚಲಿಸಿ ಈಜಾಡುತ್ತದೆ. 

(4) ಪ್ಲಾಟಿಕ್ಟೀನಿಯ: ಇವುಗಳ ದೇಹ ಚಪ್ಪಟೆಯಾಗಿದೆ. ಇವು ತೆವಳುತ್ತ ಚಲಿಸುತ್ತವೆ. ದೇಹದ ರಚನೆ ಉಳಿದ ಟಿನಾ ಫೊರಗಳಿಗಿಂತ ಭಿನ್ನವಾಗಿದೆ. ಇವುಗಳ ಮರಿಹುಳುಗಳು ಜನಕ ಪ್ರಾಣಿಯಲ್ಲಿನ ದೇಹದಲ್ಲಿರುವ ಕಾವುಗೂಡುಗಳಲ್ಲಿ ಬೆಳೆಯುತ್ತವೆ. ಉದಾಹರಣೆಗೆ: ಸೀಲೊಪ್ಲೇನ ಮತ್ತು ಟೀನೊಪ್ಲೇನ-ಇವು ಕೆಂಪು ಸಮುದ್ರ ಮತ್ತು ಜಪಾನ್ ದ್ವೀಪ ತೀರಗಳಲ್ಲಿ ಆಲ್ಸಿಯೊನೇಸಿಯ ಎಂಬ ಮೃದು ಹವಳ ಜೀವಿಯ ಮೇಲೆ ವಾಸಿಸುತ್ತವೆ; ಜಾಲ್‍ಫಿಯೆಲ ಎಂಬುದು ಅಂಬೆಲುಲ ಎಂಬ ಮೃದು ಹವಳದ ಮೇಲೆ ವಾಸಿಸುತ್ತದೆ. ಇದು ಹೆಚ್ಚಾಗಿ ಗ್ರೀನ್‍ಲ್ಯಾಂಡ್ ತೀರದಲ್ಲಿ ಕಂಡುಬಂದಿದೆ.

ವರ್ಗ 2 ನ್ಯೂಡ: ಇದರಲ್ಲಿ ಬೆರಾಯ್ಡ ಎಂಬ ಒಂದೇ ಒಂದು ಗಣವಿದೆ. ಇವುಗಳ ಆಕಾರ ಕುಲಾವಿಯಂತೆ. ಬಾಯಿ ಬಲು ಅಗಲ. ಗಂಟಲು ದೊಡ್ಡದು. ಜಠರಾವಕಾಶ ಬಹಳವಾಗಿ ಕವಲೊಡೆದಿದೆ. ಈ ಗಣಕ್ಕೆ ಸೇರಿದ ಬೆರೋಯೀ ತಂಪುನೀರಿನ ಕಡಲುಗಳಲ್ಲಿ ವಾಸಿಸುತ್ತದೆ.

ಟಿನಾಫೊರ ವಿಭಾಗದ ಪ್ರಾಣಿಗಳು ವಿಚಿತ್ರ ರೀತಿಯವು. ಇವುಗಳ ದೇಹರಚನೆ ಮತ್ತು ವಿನ್ಯಾಸ ಸೀಲೆಂಟರೇಟ ಮತ್ತು ಪ್ಲ್ಯಾಟಿಹೆಲ್ಮಿಂತೀಸ್û ವಿಭಾಗಗಳ ನಡುವಿನ ಲಕ್ಷಣಗಳಾಗಿದ್ದು ಸೀಲೆಂಟರೇಟಗಳಿಗಿಂತ ಬಹಳ ಭಿನ್ನವಾಗಿರುವ ಇವು ವಿಕಾಸದ ಹಾದಿಯಲ್ಲಿ ಅವಕ್ಕಿಂತ ಮೊದಲೇ ಉದ್ಭವಿಸಿರಬಹುದೆಂಬ ತರ್ಕಕ್ಕೆ ಎಡೆಮಾಡಿಕೊಟ್ಟಿವೆ. ಟಿನಾಫೊರ ವಿಭಾಗ ಪ್ಲ್ಯಾಟಿಹೆಲ್ಮಿಂತೀಸ್û ವಿಭಾಗದಿಂದ ಉದ್ಭವಿಸಿ ತನ್ನ ಎಲ್ಲ ಮುಖ್ಯ ಗುಣಗಳನ್ನೂ ಕಳೆದುಕೊಂಡು ನಿಮ್ನರೂಪಕ್ಕೆ ಮರಳಿರಬಹುದೆಂಬ ವಾದವೂ ಇದೆ. ತಮ್ಮ ಸ್ಪರ್ಶಾಂಗ, ಸ್ಟ್ಯಾಟೊಸಿಸ್ಟ್, ಕುಟುಕು ಕಣಗಳನ್ನು ಹೋಲುವ ಈಡೊಬ್ಲಾಸ್ಟ್‍ಗಳು ಮತ್ತು ದೇಹದ ಒಂದೇ ಜಠರಾವಕಾಶ ಮುಂತಾದ ಗುಣಗಳಲ್ಲಿ ಇವು ಒಂದು ಕಡೆ ಸೀಲೆಂಟರೇಟದ ಪ್ರಾಣಿಗಳನ್ನು ಹೋಲುತ್ತಿದ್ದರೆ ಇನ್ನೊಂದೆಡೆ ತಮ್ಮ ಚಪ್ಪಟೆದೇಹ, ತೆವಳುವಿಕೆ ಮತ್ತು ಬೆಳೆವಣಿಗೆಯ ರೀತಿಯಲ್ಲಿ ಪ್ಲ್ಯಾಟಿಹೆಲ್ಮಿಂತೀಸ್û ವಿಭಾಗದ ಪ್ರಾಣಿಗಳನ್ನು ಹೋಲುತ್ತವೆ. ಹೀಗೆ ಈ ಎರಡು ವಿಭಾಗಗಳನ್ನೂ ಹೋಲುವ ಗುಣಲಕ್ಷಣಗಳನ್ನು ಪಡೆದಿರುವ ಈ ಗುಂಪಿಗೆ ಪ್ರಾಣಿಜಗತ್ತಿನ ಒಂದು ವಿಶೇಷ ಸ್ಥಾನ ದೊರಕಿದೆ.
(ಎಂ.ಎನ್.ಎಚ್‍ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ